ಸಾರ್ವಜನಿಕರೆ ಎಚ್ಚರ! ಆರೋಗ್ಯ ಇಲಾಖೆ ಹೆಸರಲ್ಲಿ ಅಪರಿಚಿತರ ವಂಚನೆ

ಕರ್ನಾಟಕನ್ಯೂಸ್24.ಕಾಂ
ಆರೋಗ್ಯ ಇಲಾಖೆ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಗಳು ಸಾರ್ವಜನಿಕರಿಗೆ ಔಷಧಿ ಮಾತ್ರೆ ನೀಡುವುದಾಗಿ ವಂಚನೆ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೆ.
ಪ್ರಕರಣ-1
ಡಿ.7ರಂದು ಬಳ್ಳಾರಿ ನಗರದ ಕಾರ್ಕಲತೋಟದಲ್ಲಿ ಕ್ಷಯ ರೋಗಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ 81798 55688 ಮೊಬೈಲ್ ಸಂಖ್ಯೆಯಿಂದ ಕರೆ ಬಂದಿದೆ. ಆರೋಗ್ಯ ಇಲಾಖೆಯಿಂದ ನೀಡಲಾಗಿರುವ ಮಾತ್ರೆಗಳು ಬೇಡ, ಬೆಂಗಳೂರಿನಿಂದ ಪ್ರತ್ಯೇಕ ಮಾತ್ರೆಗಳನ್ನು ತರಿಸಿಕೊಡುವುದಾಗಿ ಹೇಳಿದ್ದಾರೆ. ರೋಗಿಯ ಮನೆಯ ವರಿಂದ ರೂ.4900ಗಳನ್ನು ಪಡೆದು, ವ್ಯಕ್ತಿಗೆ ಒಂದು ಮಾತ್ರೆಯನ್ನು ಸ್ಥಳದಲ್ಲಿಯೇ ನುಂಗಿಸಿ, ಉಳಿದ ಮಾತ್ರೆ ಗಳನ್ನು ತಂದುಕೊಡುವುದಾಗಿ ಹೇಳಿ ಹೊರಟು ಹೋಗಿರುತ್ತಾರೆ.
ಪ್ರಕರಣ-2
ಕಂಪ್ಲಿ ತಾಲೂಕಿನ ರಾಮಸಾಗರ ಗ್ರಾಮದಲ್ಲಿ ಕ್ಷಯ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿಗೆ 81424 48543 ಮೊಬೈಲ್ ಸಂಖ್ಯೆಯಿಂದ ಸಂಪರ್ಕಿಸಲಾಗಿದೆ. ಬೇರೆ ರೀತಿಯ ಔಷಧಿ ನೀಡಿದರೆ ಶೀಘ್ರ ಗುಣವಾಗು ವುದು ಎಂದು ನಂಬಿಸಿ ರೂ.1800ಗಳನ್ನು ಪಡೆದು ಮೋಸ ಮಾಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಪ್ರಕರಣ-3
ಡಿ.8 ರಂದು ಮುಂಡ್ರಿಗಿ ಬಡಾವಣೆಯಲ್ಲಿ 9963800 411 ದೂರವಾಣಿ ಸಂಖ್ಯೆಯಿಂದ ಕರೆಮಾಡಿ, ಶಕ್ತಿಯ ಮಾತ್ರೆಗಳನ್ನು ನೀಡಿದರೆ ಬೇಗ ಹುಡಗಿ ಋತುಮತಿ ಯಾಗುತ್ತಾರೆ ಎಂದು ನಂಬಿಸಿ ಹೆಣ್ಣು ಮಗುವಿನ ಪಾಲಕರಿಂದ ರೂ.6,500ಗಳನ್ನು ಪಡೆದು, ಜೆಲ್ ರೂಪದ ಮಾತ್ರೆಗಳನ್ನು ನೀಡಿ ಪಲಾಯನ ಮಾಡಿದ್ದಾರೆ.
ಡಿಎಚ್ಒ ಸೂಚನೆ
ಆದ್ದರಿಂದ ಆರೋಗ್ಯ ಇಲಾಖೆಯ ಸಿಬ್ಬಂದಿಯ ಸೋಗಿ ನಲ್ಲಿ ಅಪರಿಚಿತ ವ್ಯಕ್ತಿಗಳು ಮನೆಗಳಿಗೆ ಭೇಟಿ ನೀಡಿ ಔಷಧಿಗಳಿಗಾಗಿ ಹಣ ಕೇಳಿದಲ್ಲಿ ತಕ್ಷಣವೇ ಹತ್ತಿರದ ಪೋಲೀಸ್ ಠಾಣೆ ಅಥವಾ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಬೇಕು ಎಂದು ಬಳ್ಳಾರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಹೆಚ್.ಎಲ್ ಜನಾರ್ಧನ್ ಅವರು ತಿಳಿಸಿದ್ದಾರೆ.
ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳು, ಕ್ಷೇತ್ರ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು, ಸಾರ್ವಜನಿಕ ಆರೋಗ್ಯ ಸೇವೆಗಳನ್ನು ಜನತೆಗೆ ಮುಟ್ಟಿಸುವ ಕಾರ್ಯಕ್ರಮಗಳು ಮತ್ತು ಜಾಗೃತಿ ನೀಡುವ ಕಾರ್ಯವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಆದರೆ ಯಾರಿಂದಲೂ ಔಷಧಿಗಳನ್ನು ಒದಗಿಸಲು ಅಥವಾ ಬೇರೆ ಕಡೆಯಿಂದ ತರಿಸಿಕೊಡುವುದಾಗಿ ಹೇಳಿ ಹಣವನ್ನು ಪಡೆಯುವಂತಹ ಕಾರ್ಯವನ್ನು ಮಾಡುವುದಿಲ್ಲ.
ಔಷಧಿಗಳನ್ನು ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಮತ್ತು ಕೆಲವು ಔಷಧಿಗಳನ್ನು ನೇರ ನಿಗಾವಣೆಯ ಮೂಲಕ ರೋಗಿಗೆ ಸ್ಥಳದಲ್ಲಿಯೇ ನುಂಗಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸಾರ್ವಜನಿಕರು ಆರೋಗ್ಯ ಇಲಾಖೆ ಯ ಹೆಸರು ಹೇಳಿಕೊಂಡು ಮನೆಗಳಿಗೆ ಆಗಮಿಸಿದಾಗ ಆರೋಗ್ಯ ಇಲಾಖೆಯ ಸಿಬ್ಬಂದಿಯವ ರಿಗೆ ಮಾಹಿತಿ ನೀಡಿ ಇಲ್ಲವೆ, ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ಔಷಧಿಗಾಗಿ ದುಡ್ಡು ಕೊಡಬಾರದು.
ಈ ನಿಟ್ಟಿನಲ್ಲಿ ಶುಕ್ರವಾರದಂದು ಜಿಲ್ಲಾ ಐಇಸಿ ತಂಡ ಹಾಗೂ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಬಡಾವಣೆಗಳಲ್ಲಿ ಜಾಗೃತಿಯನ್ನು ಮೂಡಿಸಲಾಗಿದೆ ಎಂದು ಡಿಎಚ್‍ಒ ಡಾ.ಜನಾರ್ಧನ್ ಅವರು ತಿಳಿಸಿದ್ದಾರೆ.