ರಾಯಚೂರಿನ 5 ವರ್ಷದ ಬಾಲಕಿಗೆ ಝಿಕಾ ವೈರಸ್ ದೃಢ; ಸಚಿವ ಡಾ. ಕೆ.ಸುಧಾಕರ್

ಕರ್ನಾಟಕ ನ್ಯೂಸ್24.ಕಾಂ
ರಾಯಚೂರು ಜಿಲ್ಲೆ ಮಾನವಿ ತಾಲೂಕಿನ ಐದು ವರ್ಷದ ಬಾಲಕಿಗೆ ಝಿಕಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಕೆ ಸುಧಾಕರ್ ಸೋಮವಾರ ತಿಳಿಸಿದ್ದಾರೆ.
ಕರ್ನಾಟಕ ಝಿಕಾ ವೈರಸ್ ದೃಢಪಟ್ಟ ದಕ್ಷಿಣ ಭಾರತದ ಮೊದಲ ರಾಜ್ಯವಾಗಿದೆ. ವೈರಸ್‌ನ ಸಾರ್ವಜನಿಕರು ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ. ರೋಗ ನಿಯಂತ್ರಣಕ್ಕೆ ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಅಲ್ಲದೇ ಮಾರ್ಗಸೂಚಿಗಳನ್ನು ಬಿಡುಗೊಳಿಸಲಿದೆ ಎಂದು ಭರವಸೆ ನೀಡಿದ್ದಾರೆ.
ಝಿಕಾ ವೈರಸ್ ದೃಢಪಟ್ಟ ತಕ್ಷಣವೇ ಪ್ರಕರಣದ ಅರೋಗ್ಯ ಇಲಾಖೆ ಪುಣೆಯಿಂದ ಲ್ಯಾಬ್ ವರದಿಯನ್ನು ತರಿಸಿಕೊಂಡಿದೆ. ಬಾಲಕಿಯ ರಕ್ತದ ಮಾದರಿಯನ್ನು ಡಿಸೆಂಬರ್ 5 ರಂದು ಸಂಸ್ಕರಿಸಿ ಡಿಸೆಂಬರ್ 8 ರಂದು ವರದಿ ಮಾಡಲಾಗಿದೆ. ಮೂರು ಮಾದರಿಗಳನ್ನು ಕಳುಹಿಸಲಾಗಿತ್ತು. ಅದರಲ್ಲಿ ಎರಡು ನೆಗೆಟಿವ್ ಮತ್ತು ಒಂದು ಪಾಸಿಟಿವ್ ಬಂದಿದೆ. ಅದು ಐದು ವರ್ಷದ ಬಾಲಕಿಗೆ, ನಾವು ಆಕೆಯ ಆರೋಗ್ಯದ ಮೇಲೆ ನಿಗಾ ಇರಿಸಿದ್ದೇವೆ ಎಂದು ಸಚಿವರು ತಿಳಿಸಿದರು.
ಕೆಲ ತಿಂಗಳ ಹಿಂದೆ ಕೇರಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ ಝಿಕಾ ವೈರಸ್ ಪ್ರಕರಣಗಳು ವರದಿಯಾಗಿದ್ದವು. ರಾಜ್ಯದಲ್ಲಿ ದೃಢಪಟ್ಟ ಮೊದಲ ಪ್ರಕರಣ.
ಡೆಂಗ್ಯೂ ಮತ್ತು ಚಿಕೂನ್‌ಗುನ್ಯಾ ಪರೀಕ್ಷೆಗೆ ಒಳಪಡಿಸಿದಾಗ ಝಿಕಾ ವೈರಸ್ ಪ್ರಕರಣ ಬೆಳಕಿಗೆ ಬಂದಿದೆ. ಸಾಮಾನ್ಯವಾಗಿ, ಅಂತಹ 10 ಪ್ರತಿಶತ ಮಾದರಿಗಳನ್ನು ಪರೀಕ್ಷೆಗೆಂದು ಪುಣೆಗೆ ಕಳುಹಿಸಲಾಗುತ್ತದೆ, ಅದರಲ್ಲಿ ಇಂದು ಪಾಸಿಟಿವ್ ಕಂಡುಬಂದಿದೆ ಎಂದರು. ಅಲ್ಲದೆ, ಹುಡುಗಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ. ಸಮೀಪದ ಜಿಲ್ಲೆಗಳಲ್ಲಿ ಶಂಕಿತ ಪ್ರಕರಣಗಳ ಬಗ್ಗೆ ಸರ್ಕಾರ ನಿಗಾ ಇರಿಸಿದೆ ಎಂದು ತಿಳಿಸಿದರು.
ಏನಿದು ಝೀಕಾ ವೈರಸ್?
ಹೆಸರೇ ಹೇಳುವಂತೆ ಇದೊಂದು ವೈರಸ್. ಈಡಿಸ್ ಸೊಳ್ಳೆಯಿಂದ ಹಬ್ಬುತ್ತದೆ. ಸೊಳ್ಳೆಗಳಿಂದ ಹರಡುವ ಕಾಯಿಲೆಗಳು ಆರಂಭದಲ್ಲಿ ಸೌಮ್ಯವಾಗಿದ್ದು, ನಂತರದಲ್ಲಿ ಜೀವ ತೆಗೆಯುವ ಮಾರಕ ರೋಗಗಳ ರೀತಿ ಬದಲಾಗುತ್ತವೆ. ಅದರಂತೆಯೇ ಝೀಕಾ ವೈರಸ್ ಕೂಡ ಹಗಲಿನಲ್ಲಿ ಕಚ್ಚುವ ಈಡಿಸ್ ಸೊಳ್ಳೆಗಳ ಮೂಲಕ ಹರಡುತ್ತದೆ.
ಮೂಲ ಎಲ್ಲಿ?
1947ರಲ್ಲಿಉಗಾಂಡಾದ ಕೋತಿಯಲ್ಲಿ ಮೊದಲ ಬಾರಿಗೆ ಪತ್ತೆ. ನಂತರ 2007ರಲ್ಲಿ ಮೈಕ್ರೋನೇಷಿಯಾದಲ್ಲಿ ಮೊದಲ ಬಾರಿಗೆ ಸಾಂಕ್ರಾಮಿಕವಾಗಿ ಹರಡಿ ಆತಂಕ ಉಂಟು ಮಾಡಿತ್ತು. 2015ರಲ್ಲಿ ಲ್ಯಾಟಿನ್ ಅಮೆರಿಕದಲ್ಲಿ, ವಿಶೇಷವಾಗಿ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡಿತು.
ರೋಗದ ಲಕ್ಷಣಗಳೇನು?
ಝಿಕಾ ವೈರಸ್ ಗುರಿಯಾಗುವ ಹೆಚ್ಚಿನ ಜನರಲ್ಲಿ ರೋಗಲಕ್ಷಣಗಳು ಕಂಡು ಬರುವುದಿಲ್ಲ. ರೋಗಲಕ್ಷಣಗಳು ಸಾಮಾನ್ಯವಾಗಿ 2-7 ದಿನಗಳವರೆಗೆ ಇರುತ್ತದೆ.
WHO ಪ್ರಕಾರ, ದದ್ದುಗಳು, ಜ್ವರ, ಕಾಂಜಂಕ್ಟಿವಿಟಿಸ್, ಸ್ನಾಯು ಮತ್ತು ಕೀಲು ನೋವು, ಅಸ್ವಸ್ಥತೆ ಮತ್ತು ತಲೆನೋವು ರೋಗದ ಸಾಮಾನ್ಯ ಲಕ್ಷಣಗಳಾಗಿವೆ ಎಂದು ಹೇಳಲಾಗುತ್ತದೆ.
ಮುನ್ನೆಚ್ಚರಿಕಾ ಕ್ರಮಗಳು
ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಸದ್ಯ ಮಳೆ ಇರುವುದರಿಂದ ರಸ್ತೆಯ ಹೊಂಡಗಳಲ್ಲಿನೀರು ನಿಲ್ಲುವುದು ಸಾಮಾನ್ಯ. ಇಂತಹ ಕಡೆ ಸೊಳ್ಳೆಗಳು ಸಂತನೋತ್ಪತ್ತಿ ಹೆಚ್ಚಿಸಿಕೊಂಡು ಮನುಷ್ಯರ ಮೇಲೆ ಹಗಲಿನ ವೇಳೆ ದಾಳಿ ಮಾಡುತ್ತವೆ. ಇವುಗಳಿಂದ ರಕ್ಷಣೆ ಪಡೆದುಕೊಳ್ಳಲು ಬೇಕಾದ ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಬೇಕು.