November 29, 2023

Raichur| ಕೃಷಿ ವಿವಿಯ ಬಿ. ಟೆಕ್ ವಿದ್ಯಾರ್ಥಿಗಳಿಂದ ಅಹೋರಾತ್ರಿ ಧರಣಿ, ವಿದ್ಯಾರ್ಥಿಗಳ ಬೇಡಿಕೆಗಳು ಏನು ?

ಕರ್ನಾಟಕ ನ್ಯೂಸ್24.ಕಾಂ
ರಾಯಚೂರು: ಕಳೆದ 25 ದಿನಗಳಿಂದ ರಾಯಚೂರು ಕೃಷಿ ವಿಶ್ವವಿದ್ಯಾಲಯ ಆವರಣದ ತಾಂತ್ರಿಕ ಮಹಾ ವಿದ್ಯಾಲಯದ ಎದುರು ಬಿ. ಟೆಕ್  ವಿದ್ಯಾರ್ಥಿಗಳು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ತಮ್ಮ ಬೇಡಿಕೆ ಈಡೇರುವವರೆಗೂ ತರಗತಿ ಬಹಿಷ್ಕರಿಸಿ  ಹೋರಾಟಕ್ಕೆ ಇಳಿದಿದ್ದಾರೆ. ನಿತ್ಯ ಭಿನ್ನ ರೀತಿಯ ಹೋರಾಟದ ಮೂಲಕ ಗಮನ ಸೆಳೆಯುತ್ತಿದ್ದಾರೆ.
ಮುಖಕ್ಕೆ ಕಪ್ಪು ಮಸಿ ಬಳಿದುಕೊಂಡು, ಡಿಸಿ ಕಚೇರಿ, ಬಸವೇಶ್ವರ ವೃತ್ತದಲ್ಲಿ ಧರಣಿ. ನಗರದಲ್ಲಿ ರ‌್ಯಾಲಿ, ಕೃಷಿ ತಾಂತ್ರಿಕ ವಿಭಾಗದ ಕಚೇರಿಗೆ ಬೀಗ ಜಡಿದು ಹಾಗೂ  ಗುರುವಾರ ರಾತ್ರಿ ಮೇಣದ ಬತ್ತಿ ಬೆಳಗಿಸುವ ಮೂಲಕ ಹೋರಾಟ ಕೈಗೊಂಡಿದ್ದಾರೆ.
ವಿದ್ಯಾರ್ಥಿಗಳ ಅವಿರತ ಉಗ್ರ ಹೋರಾಟದ ಕಾರಣ ವೇನು? ವಿದ್ಯಾರ್ಥಿಗಳ ಬೇಡಿಕೆಗಳೇನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಬೇಡಿಕೆಯೇನು?
ಕೃಷಿ ಬಿ.ಟೆಕ್ (B.Tech Agri) ಪದವಿ 4 ವರ್ಷದ ವಿದ್ಯಾಭ್ಯಾಸ ಮಾಡುವ ಕೋರ್ಸ್. ಈ ಪದವಿ ಮುಗಿದು ತೇರ್ಗಡೆಯಾದ ನಂತರದಲ್ಲಿ ಸರ್ಕಾರದ ಕೃಷಿ ಇಲಾಖೆ (Agriculture Department) ಅಡಿಯಲ್ಲಿ ಬರುವಂತಹ ಕೃಷಿ ಅಧಿಕಾರಿ (AO- Agriculture Officer)  ಹಾಗೂ ಸಹಾಯಕ ಕೃಷಿ ಅಧಿಕಾರಿ (AAO- Assistant Agriculture Officer) ಹುದ್ದೆ ಗಳಿಗೆ ಅರ್ಜಿ ಸಲ್ಲಿಸಲು ಅರ್ಹತೆ ಪಡೆದು ಕೊಳ್ಳುತ್ತಾರೆ. ಇದುವರೆಗೆ ಬಿ.ಟೆಕ್ ವಿಭಾಗದ ಪದವೀಧರರಿಗೆ ನಡೆದ ನೇಮಕಾತಿ (Requirement) ಪ್ರಕ್ರಿಯೆಯಲ್ಲಿ ಶೇ. 15ರಷ್ಟು ಮೀಸಲಾತಿ (Reservation) ನೀಡಲಾಗಿತ್ತು.
ಆದರೆ ಇತ್ತೀಚೆಗೆ ಸರ್ಕಾರ ಈ ಮೀಸಲಾತಿಯಲ್ಲಿ ಬದಲಾವಣೆ ಮಾಡಿದೆ. ಕೇವಲ ಬಿ.ಟೆಕ್ ಪದವೀಧರ ವಿದ್ಯಾರ್ಥಿಗಳಿಗೆ ಅಷ್ಟೇ ಇದ್ದ ಮೀಸಲಾತಿಯನ್ನು ಇತರೆ ವಿಭಾಗದ ಬಿ.ಟೆಕ್ ಪದವೀಧರರಿಗೂ ಹಂಚಿಕೆ ಮಾಡಿ ಸರ್ಕಾರ ಆದೇಶ ನೀಡಿತ್ತು.
ಸರ್ಕಾರದ ಈ ಆದೇಶ ವಿರೋಧಿಸಿ ಬಿ.ಟೆಕ್ ತಾಂತ್ರಿಕ ವಿಭಾಗದ ಪದವಿ ವಿದ್ಯಾರ್ಥಿಗಳು ಹಲವು ದಿನಗಳಿಂದ ಅಹೋರಾತ್ರಿ ಧರಣಿ ಮಾಡುತ್ತಿದ್ದಾರೆ.
ಕೃಷಿ ತಾಂತ್ರಿಕ ನಿರ್ದೇಶನಾಲಯ
ಕೂಡಲೇ ಸರ್ಕಾರ ಮೊದಲಿಗೆ ಕೃಷಿ ಇಂಜಿನಿಯರಿಂಗ್ ಬಿ.ಟೆಕ್ ಪದವಿ ವಿದ್ಯಾರ್ಥಿಗಳಿಗೆ ಎಒ ಹಾಗೂ ಎಎಒ ಹುದ್ದೆಗಳಿಗೆ ಶೇ.15ರಷ್ಟು ಮೀಸಲಾತಿ ನೀಡಬೇಕು. ದೇಶದ ಬೇರೆ ಬೇರೆ ರಾಜ್ಯದಲ್ಲಿ ಕೃಷಿ ತಾಂತ್ರಿಕ ನಿರ್ದೇಶನಾಲಯವಿದ್ದಂತೆ, ಅದೇ ಮಾದರಿಯಲ್ಲಿ ರಾಜ್ಯದಲ್ಲಿಯೂ ಸಹ ಕೃಷಿ ತಾಂತ್ರಿಕ ನಿರ್ದೇಶನಾಲಯ ಮಾಡಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ.

Leave a Reply

Your email address will not be published.